ಬೆಂಗಳೂರು: ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಇಂದು ಮಹತ್ತರ ಕ್ರಾಂತಿಯಾಗಿದೆ. ಇಂದಿನಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹೊಸ ‘108 ಆ್ಯಂಬುಲೆನ್ಸ್’ (108 Ambulance) ಸೇವೆ ಲಭ್ಯವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರಿನಲ್ಲಿ ನಿರ್ಮಿಸಲಾದ ನೂತನ ‘108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅಧಿಕೃತವಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, “ಇಡೀ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಇಂತಹ ಅತ್ಯಾಧುನಿಕ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಜನರಿಗೆ ತ್ವರಿತ ಗತಿಯಲ್ಲಿ ಚಿಕಿತ್ಸೆ ಒದಗಿಸಲು ಈ ಕೇಂದ್ರವು ಅತ್ಯಂತ ಸಹಕಾರಿಯಾಗಲಿದೆ” ಎಂದರು.
ನೂತನ ‘ಆರೋಗ್ಯ ಕವಚ’‘108 ಕೇಂದ್ರೀಕೃತ ಕಮಾಂಡ್ ಸೆಂಟರ್ ವ್ಯವಸ್ಥೆಯ ಹೈಲೈಟ್ಸ್:
ದೇಶದಲ್ಲೇ ಮೊದಲ ಹೆಜ್ಜೆ: ಇಂತಹ ಅತ್ಯಾಧುನಿಕ ತಂತ್ರಜ್ಞಾನದ ಕೇಂದ್ರೀಕೃತ 108 ಕಮಾಂಡ್ ಸೆಂಟರ್ ಅಳವಡಿಸಿಕೊಂಡ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಖಾಸಗಿಯಿಂದ ಸಂಪೂರ್ಣ ಸರ್ಕಾರದ ಸುಪರ್ದಿಗೆ: ಕಳೆದ 18 ವರ್ಷಗಳಿಂದ ಖಾಸಗಿಯವರ (GVK EMRI) ಕೈಯಲ್ಲಿದ್ದ 108 ಸೇವೆಯನ್ನು ಇದೀಗ ಸಂಪೂರ್ಣವಾಗಿ ಸರ್ಕಾರದ ಅಧೀನಕ್ಕೆ ತರಲಾಗಿದ್ದು, ಇದರ ದಕ್ಷತೆ ಮತ್ತು ಹೊಣೆಗಾರಿಕೆ ಇನ್ನುಮುಂದೆ ಹೆಚ್ಚಿರಲಿದೆ.
‘ಗೋಲ್ಡನ್ ಅವರ್’ ಚಿಕಿತ್ಸೆಗೆ ಆದ್ಯತೆ: ರಸ್ತೆ ಅಪಘಾತಗಳು, ಹೆರಿಗೆ, ಹೃದಯಾಘಾತದಂತಹ ಕ್ಲಿಷ್ಟ ಸಂದರ್ಭಗಳಲ್ಲಿ ‘ಗೋಲ್ಡನ್ ಅವರ್’ (Golden Hour) ನಲ್ಲಿ ಚಿಕಿತ್ಸೆ ದೊರೆತರೆ ಶೇ.80 ರಷ್ಟು ಜನರನ್ನು ಬದುಕಿಸಬಹುದು. ಈ ಹೊಸ ವ್ಯವಸ್ಥೆ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಹೇಗೆ ಕೆಲಸ ಮಾಡಲಿದೆ ಈ ಅತ್ಯಾಧುನಿಕ ತಂತ್ರಜ್ಞಾನ?
ಆರೋಗ್ಯ ಇಲಾಖೆಯ ತಜ್ಞರ ಮಾಹಿತಿ ಪ್ರಕಾರ, ಈ ಹೊಸ ಕಮಾಂಡ್ ಸೆಂಟರ್ ಸಂಪೂರ್ಣವಾಗಿ ಜಿಪಿಎಸ್ (GPS) ಮತ್ತು ಸುಧಾರಿತ ಟೆಲಿಕಾಂ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ:
ಲೈವ್ ಲೊಕೇಶನ್ ಟ್ರ್ಯಾಕಿಂಗ್: ಸಾರ್ವಜನಿಕರು 108 ಗೆ ಕರೆ ಮಾಡಿದ ತಕ್ಷಣ, ಅವರ ನಿಖರವಾದ ಲೊಕೇಶನ್ ಕಂಟ್ರೋಲ್ ರೂಂಗೆ ರವಾನೆಯಾಗುತ್ತದೆ.
ಆಟೋಮ್ಯಾಟಿಕ್ ಅಲರ್ಟ್: ಕರೆ ಬಂದ ಜಾಗಕ್ಕೆ ಅತಿ ಹತ್ತಿರದಲ್ಲಿರುವ ಆ್ಯಂಬುಲೆನ್ಸ್‌ಗೆ ಕಮಾಂಡ್ ಸೆಂಟರ್‌ನಿಂದ ಸ್ವಯಂಚಾಲಿತವಾಗಿ (Automatic) ಸಂದೇಶ ರವಾನೆಯಾಗುತ್ತದೆ.
ತ್ವರಿತ ಸೇವೆ: ಇದರಿಂದಾಗಿ ಆ್ಯಂಬುಲೆನ್ಸ್ ಕೇವಲ ಕೆಲವೇ ನಿಮಿಷಗಳಲ್ಲಿ ರೋಗಿಯ ಬಳಿ ತಲುಪಲಿದ್ದು, ಅಧಿಕಾರಿಗಳು ಆ್ಯಂಬುಲೆನ್ಸ್‌ನ ಚಲನವಲನವನ್ನು ಲೈವ್ ಆಗಿ ಟ್ರ್ಯಾಕ್ ಮಾಡಬಹುದು.
ದುಬಾರಿ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ ಬಳಸಿ: ಸಿಎಂ ಮನವಿ “ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾಗಿದೆ. ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲೇ ಈಗ ಅತ್ಯುನ್ನತ ಮತ್ತು ಗುಣಮಟ್ಟದ ಚಿಕಿತ್ಸಾ ವ್ಯವಸ್ಥೆಯಿದೆ. ಸಿಎಂ ಪರಿಹಾರ ನಿಧಿಯಿಂದ (CM Relief Fund) ನೆರವು ಕೇಳಿ ಬರುವ ಜನರು, ಖಾಸಗಿ ಆಸ್ಪತ್ರೆಗೆ ಹೋಗಿ ಧನಸಹಾಯ ಕೇಳುವ ಬದಲು, ನೇರವಾಗಿ ಗುಣಮಟ್ಟದ ಸೇವೆ ಇರುವ ಸರ್ಕಾರಿ ಆಸ್ಪತ್ರೆಗಳಿಗೆ ಬರಬೇಕು,” ಎಂದು ಮುಖ್ಯಮಂತ್ರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪ್ರಸ್ತುತ ಬೆಂಗಳೂರು ನಗರ ಒಂದರಲ್ಲೇ 65 ರಿಂದ 70 ಅತ್ಯಾಧುನಿಕ ಆ್ಯಂಬುಲೆನ್ಸ್‌ಗಳು ಕಾರ್ಯಾಚರಿಸುತ್ತಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ಈ ತಂತ್ರಜ್ಞಾನದ ಸೇವೆ ಸಂಪೂರ್ಣವಾಗಿ ವಿಸ್ತರಣೆಯಾಗಲಿದೆ.
ಈ ಪುಟಗಳನ್ನು ಓದಿ……..
ಕಾರ್ಮಿಕರ ಕಲ್ಯಾಣ ಮಂಡಳಿ ಇನ್ನು ಮುಂದೆ ಸಾರಿಗೆ ಇಲಾಖೆ ವ್ಯಾಪ್ತಿಗೆ: ರಾಜ್ಯ ಸಚಿವ ಸಂಪುಟದ ಮಹತ್ವದ ತೀರ್ಮಾನ!
ಶೀಘ್ರದಲ್ಲೇ 350 ಕೆ.ಎ.ಎಸ್ (KAS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ!
