ಬಾಲ ಕಾರ್ಮಿಕ ಪದ್ಧತಿ ತೊಲಗಿಸಲು ಜಿಲ್ಲಾಧಿಕಾರಿ ಖಡಕ್ ಸೂಚನೆ:
ವಿಜಯಪುರ: ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹೋಟೆಲ್, ಇಟ್ಟಿಗೆ ಭಟ್ಟಿ ಹಾಗೂ ಗ್ಯಾರೇಜ್ಗಳ ಮೇಲೆ ನಿರಂತರ ನಿಗಾ ವಹಿಸಿ, ಬಾಲ ಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳ ಪ್ರಮುಖ ಆದೇಶಗಳು:
ಮಾಹಿತಿ ಫಲಕ ಕಡ್ಡಾಯ: ಅಂಗಡಿ, ಹೋಟೆಲ್, ಧಾಬಾ ಮತ್ತು ಇಟ್ಟಿಗೆ ಭಟ್ಟಿ ಸೇರಿದಂತೆ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ “ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಕಾನೂನುಬಾಹಿರ” ಎಂಬ ಮಾಹಿತಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು.
ದಿಢೀರ್ ದಾಳಿ: ಪ್ರತಿ ತಿಂಗಳು ತಹಶೀಲ್ದಾರರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ವಾಣಿಜ್ಯ ಸಂಸ್ಥೆಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಪರೀಕ್ಷಿಸಬೇಕು.
ಶಾಲೆಗೆ ದಾಖಲು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಿ, ಅವರ ಪಾಲಕರಿಗೆ ತಿಳಿವಳಿಕೆ ನೀಡಿ ಮತ್ತೆ ಶಾಲೆಗೆ ಸೇರಿಸುವ ಜವಾಬ್ದಾರಿಯನ್ನು ಮುಖ್ಯೋಪಾಧ್ಯಾಯರು ಮತ್ತು ಅಧಿಕಾರಿಗಳು ವಹಿಸಿಕೊಳ್ಳಬೇಕು.
ದಾಖಲೆಗಳ ಸಲ್ಲಿಕೆ: ಜಿಲ್ಲೆಯಲ್ಲಿ ಈಗಾಗಲೇ ಪತ್ತೆಯಾಗಿರುವ ಬಾಲ ಕಾರ್ಮಿಕ ಪ್ರಕರಣಗಳ ಕುರಿತು ವಿಸ್ತೃತ ವರದಿಯನ್ನು ಕೂಡಲೇ ಸಲ್ಲಿಸುವಂತೆ ಡಿಸಿ ಸೂಚಿಸಿದರು.
ಜಾಗೃತಿ ಕಾರ್ಯಕ್ರಮಗಳು:
ಬಾಲ ಕಾರ್ಮಿಕ ನಿಷೇಧ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ಕ್ವಿಜ್, ಪ್ರಬಂಧ ಸ್ಪರ್ಧೆ, ರಂಗೋಲಿ ಮತ್ತು ಬೀದಿ ನಾಟಕಗಳಂತಹ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
“ಈಗಾಗಲೇ ರಕ್ಷಿಸಿದ ಮಗು ಮತ್ತೆ ಬಾಲ ಕಾರ್ಮಿಕರಾಗದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಬೇಕು.” — ಡಾ. ಆನಂದ ಕೆ., ಜಿಲ್ಲಾಧಿಕಾರಿಗಳು.
ಈ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಯೋಜನೆಗಳ ಕುರಿತು ಮಾನ್ಯ ಕಾರ್ಮಿಕ ಅಧಿಕಾರಿಗಳಾದ ಶ್ರೀಮತಿ ಉಮಾಶ್ರೀ ಎಸ್ ಕೋಳಿ ಸವಿವರವಾಗಿ ವಿವರಿಸಿದರು. ಸಮಿತಿಯ ಸದಸ್ಯರು, ಜಿಲ್ಲೆಯ ಎಲ್ಲಾ ಕಾರ್ಮಿಕ ನಿರೀಕ್ಷಕರು ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇಂಡಿ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಪುಟಗಳನ್ನು ಓದಿ…
ನಿಮ್ಮ ಹಣಕ್ಕೆ ಸರ್ಕಾರಿ ಗ್ಯಾರಂಟಿ! MSIL ಚಿಟ್ ಫಂಡ್ ಮೂಲಕ ಉಳಿತಾಯ ಮಾಡಿ: ಸಾಲದ ಸುಳಿಯಿಂದ ಪಾರಾಗಲು ಸಚಿವ ರಾಮಲಿಂಗಾರೆಡ್ಡಿ ಕರೆ
