ಸಿಂದಗಿ: ಪಟ್ಟಣದ ಸಂಗಮ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ಕಾರ್ಮಿಕ ನಿರೀಕ್ಷಕರ ಕಛೇರಿ ಸಿಂದಗಿ ಇವರ ಜಂಟಿ ಆಶ್ರಯದಲ್ಲಿ ಸಿಂದಗಿ, ದೇವರ ಹಿಪ್ಪರಗಿ ಮತ್ತು ಆಲಮೇಲ ತಾಲೂಕಿನ ಕಟ್ಟಡ ಕಾರ್ಮಿಕರಿಗಾಗಿ ಸಿಂದಗಿ ಕಟ್ಟಡ ಕಾರ್ಮಿಕರಿಗೆ RPL ತರಬೇತಿ ಹಾಗೂ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನೋಂದಣಿ ಮತ್ತು ಸುರಕ್ಷತಾ ಪ್ರಾತ್ಯಕ್ಷಿಕೆ:
ಕಾರ್ಯಕ್ರಮದ ಆರಂಭದಲ್ಲಿ ತರಬೇತಿಗೆ ಆಗಮಿಸಿದ ಮಹಿಳಾ ಮತ್ತು ಪುರುಷ ಕಾರ್ಮಿಕರ ನೋಂದಣಿ ಪ್ರಕ್ರಿಯೆ ನಡೆಯಿತು. ತದನಂತರ ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಪ್ರಾಯೋಗಿಕವಾಗಿ (Demonstration) ಮಾಹಿತಿ ನೀಡಲಾಯಿತು.
ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಿ – ಸಿಸ್ಟರ್ ಸಿಂತೀಯಾ:
ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತೀಯಾ ಡಿ’ಮೆಲ್ಲೊ ಮಾತನಾಡಿ, “ಸಂಗಮ ಸಂಸ್ಥೆ ಮತ್ತು ಕಾರ್ಮಿಕ ಇಲಾಖೆ ಜಂಟಿಯಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿವೆ. ಕಟ್ಟಡ ಕಾರ್ಮಿಕರ ಸಂಘಗಳ ಮೂಲಕ ತಾಲೂಕಿನಾದ್ಯಂತ ಮಾಹಿತಿ ತಲುಪಿಸಲಾಗುತ್ತಿದೆ. ಕಾರ್ಮಿಕರು ಇಲಾಖೆಯೊಂದಿಗೆ ಕೈಜೋಡಿಸಿ ಸೌಲಭ್ಯಗಳನ್ನು ಪಡೆಯಬೇಕು. ಮುಖ್ಯವಾಗಿ ಕೆಲಸದ ವೇಳೆ ಸುರಕ್ಷತೆಗೆ ಗಮನ ನೀಡಬೇಕು. ನಕಲಿ ಕಾರ್ಮಿಕರ ಹಾವಳಿ ತಪ್ಪಿಸಲು ಇಲಾಖೆಗೆ ಮಾಹಿತಿ ನೀಡಿ, ಅರ್ಹರಿಗೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು,” ಎಂದು ತಿಳಿಸಿದರು. ಮತ್ತು ಕಾರ್ಮಿಕ ಇಲಾಖೆಯ ಸಿಬ್ಬಂದಿ ರಾಜು ದಂಡಾವತಿ ಮಾತನಾಡಿ, “ಕಾರ್ಮಿಕ ನಿರೀಕ್ಷಕರಾದ ಮಲ್ಲಿಕಾರ್ಜುನ ಬಗಲಿ ಅವರ ಸಲಹೆಯಂತೆ ಪ್ರತಿಯೊಬ್ಬ ಅರ್ಹ ಕಾರ್ಮಿಕರಿಗೂ ಕಿಟ್ ತಲುಪಿಸಲಾಗುತ್ತಿದೆ. ಇಲಾಖೆಯಿಂದ ನೀಡುವ ಕಿಟ್ಗಳು ವಿವಿಧ ವರ್ಗಗಳಲ್ಲಿದ್ದು, ಕಾರ್ಮಿಕರು ಮಾಡುತ್ತಿರುವ ವೃತ್ತಿಗೆ (ಗೌಂಡಿ,ಪೇಟರ , ಮೇಸ್ತ್ರಿಗಳು ಇತ್ಯಾದಿ) ಅನುಗುಣವಾಗಿ ವಿತರಿಸಲಾಗುತ್ತಿದೆ. ಅರ್ಜಿ ಸಲ್ಲಿಸಿದ ಅವಧಿಯ ಆಧಾರದ ಮೇಲೆ ಪ್ರತಿಯೊಬ್ಬರಿಗೂ ಸೌಲಭ್ಯ ಸಿಗಲಿದೆ,” ಎಂದರು.
ಹಕ್ಕುಗಳಿಗಾಗಿ ಜಾಗೃತಿ:
ದೇವರಿಪ್ಪರಗಿ ಕಾರ್ಮಿಕ ಸಂಘದ ಮುಖಂಡ ಹಸನ್ ಬಾಗವಾನ್ ಮಾತನಾಡಿ, “ನಮ್ಮ ಹಕ್ಕುಗಳನ್ನು ಪಡೆಯಲು ನಾವು ಜಾಗೃತರಾಗಬೇಕು. ನಕಲಿ ಕಾರ್ಮಿಕರನ್ನು ಗುರುತಿಸಿ ಇಲಾಖೆಗೆ ಮಾಹಿತಿ ನೀಡುವ ಮೂಲಕ ನೈಜ ಕಾರ್ಮಿಕರ ಹಿತರಕ್ಷಣೆ ಮಾಡಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಸಿಬ್ಬಂದಿ ಶ್ರೀಶೈಲ ಬಸಿರೋಟ್ಟಿ, ಆಲಮೇಲ ತಾಲೂಕು ಕಾರ್ಮಿಕ ಸಂಘದ ಮುಖಂಡ ರಮೇಶ ಬಮ್ಮನಜೋಗಿ ಉಪಸ್ಥಿತರಿದ್ದರು. ಸಂಗಮ ಸಂಸ್ಥೆಯ ವಿಜಯಕುಮಾರ ಭಟನೂರ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀ ಬಸವರಾಜ ಬಿಸನಾಳ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಕಾರ್ಮಿಕರಿಗೆ ಸುರಕ್ಷತಾ ಕಿಟ್ಗಳನ್ನು ವಿತರಿಸಲಾಯಿತು.
