ಕರ್ನಾಟಕ ಸರ್ಕಾರದ ಎಲ್ಲಾ ಸೇವೆಗಳು ಇನ್ಮುಂದೆ ‘ಸಕಾಲ’ ವ್ಯಾಪ್ತಿಗೆ: ಅಕ್ಟೋಬರ್ 2ಕ್ಕೆ ‘ನಮ್ಮ ಸೇವಾ ಆ್ಯಪ್’ ಲೋಕಾರ್ಪಣೆ!
ಬೆಂಗಳೂರು: ರಾಜ್ಯದ ನಾಗರಿಕರಿಗೆ ಸರ್ಕಾರಿ ಸೇವೆಗಳು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಸಿಗುವಂತೆ ಮಾಡಲು ಕರ್ನಾಟಕ ಸರ್ಕಾರ ಬೃಹತ್ ಹೆಜ್ಜೆ ಇಟ್ಟಿದೆ. ರಾಜ್ಯ ಸರ್ಕಾರದ ಎಲ್ಲಾ ಸೇವೆಗಳನ್ನು ‘ಸಕಾಲ’ ಯೋಜನೆಯಡಿ ತರುವ ಮಹತ್ವದ ಗುರಿ ಹೊಂದಲಾಗಿದ್ದು, ಒಟ್ಟು 2,456 ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರಲು ಸಿದ್ಧತೆ ನಡೆಸಲಾಗಿದೆ ಎಂದು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ತಿಳಿಸಿದ್ದಾರೆ.
ಸಕಾಲ’ ವ್ಯಾಪ್ತಿಗೆ ಸರ್ಕಾರದ 2,456 ಸೇವೆಗಳು! ಅಕ್ಟೋಬರ್ 2ಕ್ಕೆ ‘ನಮ್ಮ ಸೇವಾ ಆ್ಯಪ್’ ಬಿಡುಗಡೆ!
ನಾಗರಿಕರು ತಮ್ಮ ಮೊಬೈಲ್ ಮೂಲಕವೇ ಸರ್ಕಾರಿ ಸೇವೆಗಳನ್ನು ಹಣರಹಿತ, ಕಾಗದರಹಿತ ಹಾಗೂ ಸಂಪರ್ಕರಹಿತವಾಗಿ ಪಡೆಯಲು ‘ನಮ್ಮ ಸೇವಾ ಆ್ಯಪ್’ ಅನ್ನು ಬರುವ ಅಕ್ಟೋಬರ್ 2 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.
ಈ ಆ್ಯಪ್ ಜೊತೆಗೆ ವಾಟ್ಸಾಪ್ ಚಾಟ್ಬಾಟ್ (WhatsApp Chatbot) ಮೂಲಕವೂ ಸಾರ್ವಜನಿಕರು ತಮ್ಮ ದೂರುಗಳು ಮತ್ತು ಕುಂದುಕೊರತೆಗಳನ್ನು ಅತ್ಯಂತ ಸರಳವಾಗಿ ಸಲ್ಲಿಸಬಹುದು. ಸಾರ್ವಜನಿಕರು ಕಳುಹಿಸುವ ಆಡಿಯೋ ಅಥವಾ ಪಠ್ಯ ಸಂದೇಶದ ಆಧಾರದ ಮೇಲೆಯೇ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೂಲಕ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ರವಾನೆಯಾಗಲಿದೆ.
26,387 ದೂರುಗಳಲ್ಲಿ 13,872 ಕುಂದುಕೊರತೆಗಳಿಗೆ ಮುಕ್ತಿ!
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ‘ಪ್ರಜಾ ಸೇವಾ ಅಭಿಯಾನ’ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಯಾನದ ವೇಳೆ ಒಟ್ಟು 26,387 ಕುಂದುಕೊರತೆ ಅರ್ಜಿಗಳು ನೋಂದಣಿಯಾಗಿದ್ದು, ಅವುಗಳಲ್ಲಿ ಈಗಾಗಲೇ 13,872 ಅರ್ಜಿಗಳನ್ನು ಪರಿಹರಿಸಲಾಗಿದೆ.
ಉಳಿದ 12,514 ಅರ್ಜಿಗಳ ಪರಿಶೀಲನೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಬಂದಿರುವ ದೂರುಗಳಲ್ಲಿ ಕಂದಾಯ ಇಲಾಖೆ, ವೃದ್ಧಾಪ್ಯ ವೇತನ ಹಾಗೂ ಪಡಿತರ ಚೀಟಿಗೆ ಸಂಬಂಧಿಸಿದ ಮನವಿಗಳೇ ಹೆಚ್ಚಾಗಿವೆ ಎಂದು ಮಾಹಿತಿ ನೀಡಲಾಗಿದೆ.
ಪ್ರತಿ ಶನಿವಾರ ‘ಜನಸ್ಪಂದನ’ ಸಭೆ ಕಡ್ಡಾಯ:
ಸರ್ಕಾರಿ ಕೆಲಸಗಳಲ್ಲಿ ವಿಳಂಬ ಧೋರಣೆ ತಪ್ಪಿಸಲು ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ:
ಪ್ರತಿ ಶನಿವಾರ: ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜನಸ್ಪಂದನಾ ಸಭೆಗಳು ಕಡ್ಡಾಯವಾಗಿ ನಡೆಯಲಿವೆ.
1 ಮತ್ತು 3ನೇ ಶನಿವಾರ: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
2 ಮತ್ತು 4ನೇ ಶನಿವಾರ: ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಸಭೆಗಳನ್ನು ಆಯೋಜಿಸಲಾಗುವುದು.
ಸಭೆಗಳಲ್ಲಿ ಹೊಸದಾಗಿ ದೂರು ನೀಡುವವರಿಗೆ ಹಾಗೂ ಈ ಹಿಂದೆ ದೂರು ನೀಡಿ ಪರಿಹಾರ ಸಿಗದವರಿಗೆ ಆದ್ಯತೆಯ ಮೇರೆಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗುತ್ತದೆ.
ಆಡಳಿತ ಸುಧಾರಣೆ, ಸಕಾಲ ಮಿಷನ್ ಹಾಗೂ ಸಾರ್ವಜನಿಕ ಕುಂದುಕೊರತೆ ವಿಭಾಗಗಳನ್ನು ಇದೀಗ ‘ಪ್ರಜಾಸೇವಾ ಇಲಾಖೆ’ಯಲ್ಲಿ ವಿಲೀನಗೊಳಿಸಲಾಗಿದ್ದು, ಸಾರ್ವಜನಿಕರಿಗೆ ಸೇವೆಗಳು ಇನ್ನಷ್ಟು ಶೀಘ್ರವಾಗಿ ತಲುಪಲಿವೆ.
